ನಿರಂತರ ಸ್ಪೂರ್ತಿಯ ಸೆಲೆಗೆ ನನ್ನದೊಂದು ನಾಮಿನೇಶನ್
ನಾವೆಲ್ಲಾ ನಮ್ಮ ಆಯುಷ್ಯವನ್ನು ನಮ್ಮಿಂದ ದೂರಾದವರಿಗೆ ನಾಮಿನೇಟ್ ಮಾಡಿ ಮತ್ತೆ ಅವರ ಜೀವ ಮರುಕಳಿಸುವಂತೆ ಭಗವಂತ ಮಾಡಿದ್ದರೆ ನಮ್ಮ ಮೊದಲ ನಾಮಿನೇಶನ್ ಶಂಕರ ನಾಗ್ ಅವರಿಗೆ ಇರುತ್ತಿತ್ತು. ಹೌದು ಸಾವಿರಾರು ಕನಸುಗಳ ಕಣ್ಣಲೇ ತುಂಬಿಕೊಂಡು ನೂರಾರು ಯೋಜನೆಗಳ ಗರ್ಭವನ್ನು ಹೊತ್ತು ತಿರುಗುತ್ತಿದ್ದ ನಿಮಗೆ ದೀರ್ಘ ಆಯುಷ್ಯವೆಂಬ ನವಮಾಸ ತುಂಬಿದ ಅನುಭವ ಕೊಡದೇ ಹೋದ ಆ ದೇವರು ಅದೆಷ್ಟು ಕ್ರೂರಿ ? ತಾನೇ ಸೃಷ್ಟಿಸಿದ ಆ ಜೀವವನ್ನು ತಾನೇ ಆಸೆ ಪಟ್ಟು ಕಿತ್ತುಕೊಂಡನೇ ? ಆ ಜವರಾಯ ಅಂದು ನಿಮ್ಮನ್ನು ಕರೆದುಕೊಂಡು ಹೋಗದಿದ್ದರೆ ಇಂದು ನೀವು ಏನೇನು ಸಾಧಿಸುತ್ತಿದ್ದೀರೋ? ಇನ್ಫ಼ೋಸಿಸ್, ವಿಪ್ರೋಗಳನ್ನು ಮೀರಿಸುವಂತ ಕಂಪನಿಗಳನ್ನು ಕಟ್ಟುತ್ತಿದ್ದೀರೇನೋ ಗೂಗಲ್ನಂಥ ಹೆಮ್ಮೆ ಪಡುವ ಸಂಸ್ಥೆ ಇಂದು ಭಾರತದಲ್ಲಿರುತ್ತಿತ್ತೇನೋ? ಇಂತಹ ಯೋಜನೆಗಳ ಹೆಣೆವ ಜೀವ ಇಲ್ಲೇ ಇದ್ದರೆ ಈ ಭೂಮಿ ಸ್ವಗಕ್ಕಿಂತ ಮಿಗಿಲಾದಿತೆಂದು ದೇವರು ಅಸೂಯೆ ಪಟ್ಟನೇ ?
ಶಂಕರ ನಾಗ್ ಹೆಸರು ಮನಸಿನಲಿ ಬಂದಾಗಲೆಲ್ಲಾ ಅವರು ನಮ್ಮಿಂದ ದೂರಾಗಿ ಇಂದಿಗೆ ಸರಿಯಾಗಿ (ಸಪ್ಟೆಂಬರ್ ೩೦, ೧೯೯೦) ೨೮ ವರ್ಷಾಗಳಾದರೂ ಸಹ. ಈ ಪ್ರಶ್ನೆಗಳು ಮತ್ತೆ ಮತ್ತೆ ಕೊರೆಯುತ್ತಿವೆ. ಜನ್ಮಾಂತರಗಳ ಬಗ್ಗೆ ನಂಬಿಕೆಯಿಲ್ಲದಿದ್ದರೂ ನಿಮ್ಮ ಮರಣದ ನಂತರವೂ ಸಹ ಹುಟ್ಟಿದ ಪೀಳಿಗೆಯವರು ಎಂದೂ ನಿಮ್ಮನ್ನು ನೋಡದಿದ್ದರೂ ನಿಮ್ಮ ಅಭಿಮಾನಿಗಳಾಗಿ ನಿಮ್ಮ ಅನುಕರಣೆ ಮಾಡುತ್ತಿರುವುದು ಜನ್ಮಾಂತರದ ರಹಸ್ಯಕ್ಕಿಂತಲೂ ಸೋಜಿಗ. ಇಂದು ನಾವು ಓಡಾಡುತ್ತಿರುವ ಈ ಬೆಂಗಳೂರು ಮೆಟ್ರೋವನ್ನು ನೀವು ಮೂರು ದಶಕಗಳ ಹಿಂದೇನೇ ಕನಸು ಕಂಡಿದ್ದೀರಿ. ಬೆಂಗಳೂರಿಂದು ಬೃಹಾದಾಕರವಾಗಿ ಬೆಳೆದು ಬಲೂನಿನಂತೆ ಒಡೆಯುವ ಮುನ್ನವೇ ಅದಕ್ಕೆ ಪರಿಹಾರದ ಬಗ್ಗೆ ಅಂದೇ ಮುಂದಾಲೋಚನೆಯ ಮಾಡಿಟ್ಟಿದ್ದ ತಾಂತ್ರಿಕ ಮಹರ್ಷಿ. ನಂದಿ ಬೆಟ್ಟಕ್ಕೆ ರೋಪ್ ವೇ ಹಾಕಬೇಕೆನ್ನುವ ನಿಮ್ಮ ಕನಸು ಇಡೇರಿಸುವ ಸೌಭಾಗ್ಯ ಇನ್ನೂ ನಮ್ಮದಾಗಿಲ್ಲ ಎನ್ನುವುದೇ ನಮ್ಮ ಕೊರಗು.
ಕನ್ನಡದ ಪ್ರತಿ ಚಿತ್ರಗಳು ರೆಕಾರ್ಡಿಂಗ್ ಗಳಿಗಾಗಿ ಮದರಾಸಿನವರ ಸ್ಟುಡಿಯೋಗಳಲ್ಲಿ ಮರ್ಜಿ ಕಾಯುತ್ತಿರುವಾಗ ಕನ್ನಡದವರಿಗಾಗಿಯೇ ಬೆಂಗಳೂರಿನಲ್ಲಿ ಮೊಟ್ಟ ಮೊದಲ ರೆಕಾರ್ಡಿಂಗ ಸ್ಟುಡಿಯೋ ತೆರೆಯುವುದರ ಮೂಲಕ ಅದೆಷ್ಟು ನಿರ್ಮಾಪಕರು, ಕಲಾವಿದರು ಮದರಾಸಿಗೆ ಓಡಾಡುವದ ತಪ್ಪಿಸಿದಿರಿ. ಇಡೀ ಭಾರತದಲ್ಲೇ ಮೊಟ್ಟ ಬಾರಿಗೆ ಸಮುದ್ರಾದಳದಲ್ಲಿ ಚಿತ್ರಿಕರಣ ಮಾಡಿ ’ಒಂದು ಮುತ್ತಿನ ಕಥೆ’ ಸಿನಿಮಾವನ್ನು ದೇಶವೆಲ್ಲಾ ಬೆರಗಾಗಿ ಕನ್ನಡ ಚಿತ್ರರಂಗದದತ್ತ ನೋಡುವಂತೆ ಮಾಡಿದಿರಿ. ನಿಮ್ಮ ಕಾರ್ಯಕ್ಷೇತ್ರ ಕನ್ನಡಕ್ಕಷ್ಟೇ ಸಿಮಿತವಾಗದೇ ರಾಷ್ಟ್ರ ಮಟ್ಟದಲ್ಲಿ ’ಮಾಲ್ಗುಡಿ ಡೇಸ್’ ಹಿಂದಿ ಧಾರವಾಹಿ ದೂರದರ್ಶನಕ್ಕಾಗಿ ನಿರ್ದೇಶಿಸಿ ಕನ್ನಡದ ಕಲಾವಿದರನ್ನು ದಿಲ್ಲಿಯವರೆಗೆ ಕೊಂಡೊಯ್ಯಿದಿರಿ. ’ಮಾಲ್ಗುಡಿ ಡೇಸ್’ ಮೂಲ ಕಥೆಗಾರ ಆರ್ ಕೆ ನಾರಾಯಣ್ ಅವರು ಶಂಕರನಾಗ್ ಬಿಟ್ಟು ಬೇರೆ ಯಾವ ನಿರ್ದೇಶಕರಿಗೂ ಅದನ್ನು ಧಾರವಾಹಿ ಮಾಡಲು ಕಾಪಿರೈಟ್ ಕೊಡುವುದಿಲ್ಲವೆಂದು ಕರಾರು ಹಾಕಿದ್ದು ನಿಮ್ಮ ನಿರ್ದೇಶನದ ಪ್ರಬುದ್ಧತೆಗೆ ಉದಾಹರಣೆ.
ಕನ್ನಡಿಗರಿಗೆ ಈ ರಿಸಾರ್ಟ್ ಮತ್ತು ಕ್ಲಬ್ ಎಂದರೇನು ಎಂದು ತಿಳಿಯುವ ಮೊದಲೇ ಕನ್ನಡಿಗರ ಹೆಮ್ಮೆಯ ’ಕಂಟ್ರಿ ಕ್ಲಬ್’ ಎಲ್ಲರೂ ಹುಬ್ಬೇರಿಸುವಂತೆ ತಯಾರು ಮಾಡಿದಿರಿ. ಹೀಗೆ ಬೇರೆ ಯಾರೂ ಇಂತದನ್ನು ಯೋಚಿಸುವ ಮುನ್ನವೇ ಕಾರ್ಯರೂಪಕ್ಕೆ ತರುತ್ತಿದ್ದ ನಿಮ್ಮದು ನಿಜಕ್ಕೂ ’ಮಿಂಚಿನ ಓಟ’. ನಟ, ನಿರ್ದೇಶಕ, ನಿರ್ಮಾಪಕ, ರಂಗಕಲಾವಿದ, ತಂತ್ರಜ್ಞ, ಜನನಾಯಕ, ಸ್ನೇಹಿತ ನಿಮ್ಮನ್ನು ಎನೆಂದು ವರ್ಣಿಸಲಿ? ಮುವತ್ತಾರು ವರ್ಷಕ್ಕೆಲ್ಲಾ ಮುವತ್ತು ದಿಗ್ಗಜರು ಸೇರಿ ಕೂಡ ಮಾಡದಷ್ಟ್ಟು ಸಾಧನೆಯ ಮಾಡಿ ಆಲದ ಮರದೆತ್ತರ ಬೆಳೆದರೂ ತನ್ನ ನೆರಳಡಿ ನೂರಾರು ಸಸಿಗಳ ನೆಟ್ಟು ಬೆಳೆಸಿದ ಪಾಲಕ.
ನೀವಂದರೆ ಒಬ್ಬ ವ್ಯಕ್ತಿಯಲ್ಲ ಒಂದು ಶಕ್ತಿ..ದೇವರು ನಿಮಗೆ ಕೊಡಲಿಲ್ಲ ಆಯುಷ್ಯ ಪೂರ್ತಿ ಆದರೆ ನೀವು ಹಲವಾರು ಪೀಳಿಗೆಗೆ ಕೊಟ್ಟಿರಿ ಸ್ಪೂರ್ತಿ. ನನ್ನ ಈ ಮೊದಲ ಬ್ಲಾಗ್ ಬರಹಕ್ಕೂ ನೀವೇ ಸ್ಪೂರ್ತಿ.
